Ali

Ali

Friday, December 30, 2011

ಮಮಕಾರ..!

ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!

ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಮಾಡಿದವರೊಂದಿಗೆ ಒಮ್ಮೆ ಮಾತಾಡಬೇಕು. ಅವರ ಕೈಕುಲುಕಬೇಕು. ಜತೆಗೆ ನಿಂತು ಫೋಟೊ ತೆಗೆಸಿಕೊಳ್ಳಬೇಕು. ಆಟೊಗ್ರಾಫ್ ಹಾಕಿಸಿಕೊಳ್ಳಬೇಕು. ಅವರಿಂದ ಶಹಬ್ಬಾಸ್ ಅನ್ನಿಸಿಕೊಳ್ಳಬೇಕು… ಇಂಥವೇ ಆಸೆಗಳು ವಿದ್ಯಾರ್ಥಿಗಳಿಗಿರುತ್ತವೆ. ಅದರಲ್ಲೂ ಮುಖ್ಯಮಂತ್ರಿಗಳೊಂದಿಗೆ, ರಾಜ್ಯಪಾಲರೊಂದಿಗೆ, ಪ್ರಧಾನಿಗಳೊಂದಿಗೆ, ರಾಷ್ಟ್ರಪತಿಗಳೊಂದಿಗೆ ಒಂದೆರಡು ನಿಮಿಷದ ಮಟ್ಟಿಗೆ ಮಾತಾಡಬೇಕು ಎಂಬುದು-ಹೌದು, ಅದು ವಿದ್ಯಾರ್ಥಿ ಜೀವನದಲ್ಲಿರುವ ಪ್ರತಿಯೊಬ್ಬರ ಕನಸು, ಕನವರಿಕೆಯೇ ಆಗಿರುತ್ತದೆ.
ಆದರೆ, ಬಹಳಷ್ಟು ಮಂದಿಯ ವಿಷಯದಲ್ಲಿ ಇಂಥ ಕನಸುಗಳು ಬರೀ ಕನಸುಗಳಾಗಿಯೇ ಉಳಿದುಬಿಡುತ್ತವೆ. ಮುಖ್ಯಮಂತ್ರಿ/ಪ್ರಧಾನಿ/ರಾಷ್ಟ್ರಪತಿಗಳ ಕೈಕುಲುಕುವುದಿರಲಿ, ಅವರನ್ನು ಹತ್ತಿರದಿಂದ ನೋಡುವುದೂ ಬಹುಮಂದಿಗೆ ಸಾಧ್ಯವಾಗುವುದಿಲ್ಲ. ಅಥವಾ ಅಂಥದೊಂದು ಅವಕಾಶ ಕೈ ಹಿಡಿಯುವ ವೇಳೆಗೆ ಅವರ ವಿದ್ಯಾರ್ಥಿ ಜೀವನವೇ ಮುಗಿದು ಹೋಗಿರುತ್ತದೆ. ಆದರೆ, ಕೆಲವು ಅದೃಷ್ಟವಂತರಿಗೆ ಮಾತ್ರ ವಿದ್ಯಾರ್ಥಿ ಜೀವನದಲ್ಲೇ ಅನಿರೀಕ್ಷಿತವಾಗಿ ಜಾಕ್ಪಾಟ್ ಹೊಡೆಯುತ್ತದೆ. ಸುಮ್ಮನೆ, ತಮಾಷೆಗೆಂದು ಬರೆದ ಒಂದು ಪತ್ರ ಒಂದು ಅಪೂರ್ವ ಅವಕಾಶವನ್ನೇ ಒದಗಿಸಿಬಿಡುತ್ತದೆ. ನಾಲ್ಕು ವರ್ಷಗಳ ಹಿಂದೆ ಅಂಥದೊಂದು ಅಪೂರ್ವ ಅವಕಾಶ ಗಿಟ್ಟಿಸಿಕೊಂಡು ಅಂದಿನ ರಾಷ್ಟ್ರಪತಿ ಅಬ್ದುಲ್ಕಲಾಂ ಅವರೆದುರು ಹಾಡುವ; ಅವರ ವಿಶೇಷ ಅತಿಥಿಯಾಗಿ ರಾಷ್ಟ್ರಪತಿ ಭವನದಲ್ಲಿ ಉಳಿವ ಸುಯೋಗ ಪಡೆದ ಅರುಣ್ ಪ್ರಕಾಶ್ ಎಂಬ ಹುಡುಗನ ಬೊಂಬಾಟ್ ಕಥೆ ಇದು.
***
ಈ ಅರುಣ್ ಪ್ರಕಾಶ್, ತಮಿಳ್ನಾಡಿನ ಪುಟ್ಟ ಹಳ್ಳಿಯಿಂದ ಬಂದವನು. ತನ್ನೂರಿಗೆ ಹತ್ತಿರವೇ ಇದ್ದ ಹೈಸ್ಕೂಲಿನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಆತ ಓದಿನಲ್ಲಿ ಮಾತ್ರವಲ್ಲ, ಹಾಡುಗಾರಿಕೆಯಲ್ಲೂ ಮುಂದಿದ್ದ. ಕರ್ನಾಟಕ ಸಂಗೀತದಲ್ಲಿ ಎಕ್ಸ್ಪರ್ಟ್ ಅನ್ನಿಸಿಕೊಂಡಿದ್ದ. `ಎಂದರೋ ಮಹಾನುಭಾವುಲು, ಅಂದರಕಿ ವಂದನಮು’ ಎಂದು ಆತ ಹಾಡಲು ನಿಂತರೆ- ಎದುರಿಗಿದ್ದವರು ಮೈಮರೆಯುತ್ತಿದ್ದರು. ವಾಹ್ ವಾಹ್ ಎಂದು ಮೆಚ್ಚುಗೆಯ ಉದ್ಗಾರ ತೆಗೆಯುತ್ತಿದ್ದರು.
ಇಂಥ ಅರುಣ್ ಪ್ರಕಾಶನ ಶಾಲೆಯಲ್ಲಿ, ಅಧ್ಯಾಪಕರು ಮೇಲಿಂದ ಮೇಲೆ ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಜೀವನ, ಸಾಧನೆಯ ಬಗ್ಗೆ ಹೇಳುತ್ತಲೇ ಇದ್ದರು. ಕಲಾಂ ಅವರಂತೆಯೇ ನೀವೂ ದೊಡ್ಡ ಹೆಸರು ಮಾಡಬೇಕು. ದೇಶಕ್ಕೆ ಒಳ್ಳೆಯ ಹೆಸರು ತರಬೇಕು ಎನ್ನುತ್ತಿದ್ದರು. ಈ ಮಾತುಗಳನ್ನೇ ಮೇಲಿಂದ ಮೇಲೆ ಕೇಳಿದ್ದರ ಪರಿಣಾಮವೋ ಏನೋ, ಈ ಹುಡುಗ ಅಬ್ದುಲ್ ಕಲಾಂ ಅವರ ಭಕ್ತನಾಗಿ ಹೋದ. ಹೇಗಾದರೂ ಸರಿ, ಅವರೊಂದಿಗೆ ಒಮ್ಮೆ ಮಾತಾಡಬೇಕು ಎಂದು ಮನದಲ್ಲಿಯೇ ನಿರ್ಧರಿಸಿದ.
ಹೀಗಿದ್ದಾಗಲೇ, ೨೦೦೪ರ ಆಗಸ್ ೧೫ರ ಸ್ವಾತಂತ್ರ್ಯ ದಿನಚರಣೆಯ ಅಂಗವಾಗಿ, ಶಾಲೆಯಲ್ಲಿ ಅರುಣ್ ಪ್ರಕಾಶನ ಹಾಡುಗಾರಿಕೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂಬಂಧವಾಗಿ ಆಹ್ವಾನ ಪತ್ರಿಕೆಗಳೂ ಪ್ರಿಂಟ್ ಆದವು. ಅವುಗಳನ್ನು ಕಂಡದ್ದೇ ಈ ಅರುಣ್ ಪ್ರಕಾಶ್ಗೆ ಒಂದು ಐಡಿಯಾ ಬಂತು. ಆತ ಒಂದು ಹಾಳೆಯಲ್ಲಿ ತನ್ನ ಹೆಸರು, ವಿಳಾಸ, ಓದುತ್ತಿರುವ ಶಾಲೆ, ತರಗತಿ, ಹವ್ಯಾಸದ ಬಗೆಗೆ ಸಂಕ್ಷಿಪ್ತವಾಗಿ ಬರೆದ. ನಂತರ `ನಿಮ್ಮೆದುರು ನಿಂತು ಎಂದರೋ ಮಹಾನುಭಾವುಲು… ಗೀತೆಯನ್ನು ಹಾಡಬೇಕೆಂಬುದು ನನ್ನ ಕನಸು, ಮಹದಾಸೆ. ಇದೇ ಆಗಸ್ಟ್ ೧೫ರಂದು ಸ್ಕೂಲಿನಲ್ಲಿ ನನ್ನ ಹಾಡುಗಾರಿಕೆಯಿದೆ. ನೀವು ದಯವಿಟ್ಟು ಬರಬೇಕು’ ಎಂದು ಬರೆದ. ನಂತರ ಆ ವಿವರಣೆಯ ಜತೆಗೆ ಆಹ್ವಾನ ಪತ್ರಿಕೆ ಲಗತ್ತಿಸಿ, ಆಡಿ.ಂಃಆUಐ ಏಂಐಂಒ, ಖಿಊಇ PಖಇSIಆಇಓಖಿ. ಆಇಐಊI, IಓಆIಂ ಎಂದು ವಿಳಾಸ ಬರೆದು ಪೋಸ್ಟ್ ಮಾಡಿಯೇ ಬಿಟ್ಟ. ತನ್ನ ಪತ್ರಕ್ಕೆ ಉತ್ತರ ಬಂದೀತೆಂಬ ಚಿಕ್ಕದೊಂದು ನಿರೀಕ್ಷೆಯೂ ಆತನಿಗಿರಲಿಲ್ಲ. ಆದರೂ, ಏನೂ ಫಜೀತಿಯಾಗದಿರಲಿ ಎಂಬ ಉದ್ದೇಶದಿಂದ ತನ್ನ ಮನೆಯ ವಿಳಾಸ ನೀಡಿದ್ದ.
ಇದಾಗಿ, ಒಂದೇ ವಾರದ ಅವಧಿಯಲ್ಲಿ ಆತನ ಹೆಸರಿಗೆ ಶಾಲೆ ಮತ್ತು ಮನೆ-ಎರಡೂ ವಿಳಾಸಗಳಿಗೆ ದಿಲ್ಲಿಯಿಂದ ಪತ್ರ ಬಂತು. ರಾಷ್ಟ್ರಪತಿ ಅಬ್ದುಲ್ ಕಲಾಂ, ಅವನಿಗೆ ಖುದ್ದಾಗಿ ಪತ್ರ ಬರೆದಿದ್ದರು. `ಅರುಣ್ ಪ್ರಕಾಶ್ನ ಹಾಡು ಕೇಳಲು ತಮಗೆ ಇಷ್ಟವೆಂದೂ, ಆದರೆ ಸಮಯದ ಅಭಾವದಿಂದ ಆತನ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲವೆಂದೂ ವಿವರಿಸಿ, ವಿಷಾದ ಸೂಚಿಸಿದ್ದರು ಕಲಾಂ. ಅಷ್ಟೇ ಅಲ್ಲ, ಒಮ್ಮೆ ದಿಲ್ಲಿಗೆ ಬಂದು ಭೇಟಿಯಾಗು’ ಎಂದೂ ಸೇರಿಸಿದ್ದರು.
ಈ ಪತ್ರ ಕಂಡು ಶಾಲೆಯ ಮುಖ್ಯೋಪಾಧ್ಯಾಯರು ನಡುಗಿ ಹೋದರು. ಎಲ್ಲಿಯ ಅಬ್ದುಲ್ ಕಲಾಂ, ಎಲ್ಲಿಯ ಅರುಣ್ ಪ್ರಕಾಶ್? ಹೋಬಳಿ ಮಟ್ಟದ ಶಾಲೆಯೊಂದರ ಅಬ್ಬೇಪಾರಿ ಹುಡುಗ ಘನತೆವೆತ್ತ ರಾಷ್ಟ್ರಪತಿಗಳಿಗೆ- ಅದೂ ಏನು? ತನ್ನ ಹಾಡು ಕೇಳಲು ಬನ್ನಿ ಎಂದು ಆಹ್ವಾನಿಸಿ ಕಾಗದ ಬರೆಯುವುದು ಅಂದರೇನು ಎಂದೇ ಅವರು ಯೋಚಿಸಿದರು. ಹುಡುಗನ ವರ್ತನೆ ಉದ್ಧಟತನದ್ದು ಎಂದೇ ಅವರಿಗೆ ತೋರಿತು. ಈ ಸಂಬಂಧವಾಗಿ ನಾಳೆ ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರೆ ಗತಿ ಏನು ಎಂದು ಯೋಚಿಸಿದವರೇ, ವಿದ್ಯಾರ್ಥಿಯ ಪರವಾಗಿ ತಾವೇ ಕ್ಷಮಾಪಣೆ ಪತ್ರ ಬರೆಯಲು ನಿರ್ಧರಿಸಿದರು. ಈ ವಿಷಯವನ್ನು ವಿದ್ಯಾರ್ಥಿಯ ಪೋಷಕರಿಗೂ ತಿಳಿಸಿದರು. ಕಡೆಗೆ ಅರುಣ್ ಪ್ರಕಾಶನ ತಂದೆ-ತಾಯಿಯ ಸಹಿಯನ್ನೂ ಪಡೆದು ಕ್ಷಮಾಪಣೆ ಪತ್ರ ಬರೆದೇ ಬಿಟ್ಟರು. ಕಡೆಯಲ್ಲಿ- `ಮಹಾಸ್ವಾಮಿ, ನೀವೇನೋ ಕೃಪೆಯಿಟ್ಟು ನಮ್ಮ ಹುಡುಗನನ್ನು ದಿಲ್ಲಿಗೆ ಆಹ್ವಾನಿಸಿದ್ದೀರಿ. ಆದರೆ ನಮಗೆ ದಿಲ್ಲಿ ಯಾವ ದಿಕ್ಕಿಗಿದೆ ಎಂದೂ ಗೊತ್ತಿಲ್ಲ. ಒಂದು ವೇಳೆ ಅಲ್ಲಿಗೆ ಬಂದೆವು ಅಂತಾನೇ ಇಟ್ಟುಕೊಳ್ಳಿ. ಆದರೆ ನಾವು ತಂಗುವುದಾದರೂ ಎಲ್ಲಿ? ನಿಮ್ಮನ್ನು ಭೇಟಿಯಾಗುವುದಾದರೂ ಹೇಗೆ? ನಮ್ಮ ವಿದ್ಯಾರ್ಥಿಯ ಉದ್ಧಟತನವನ್ನು ಕ್ಷಮಿಸಿ’ ಎಂದೆಲ್ಲ ಬರೆದು ಪತ್ರ ಮುಗಿಸಿದ್ದರು.
ಇದಿಷ್ಟೂ ನಡೆದದ್ದು ಆಗಸ್ಟ್ ೨೦೦೪ರಲ್ಲಿ. ನಂತರ ಎರಡು ತಿಂಗಳು ಯಾವುದೇ ಸುದ್ದಿಯಿಲ್ಲ. ಪರಿಣಾಮ, ಕಲಾಂ ಪತ್ರದ ವಿಚಾರವನ್ನು ಅರುಣ್ ಪ್ರಕಾಶನೂ ಮರೆತ, ಮೇಸ್ಟ್ರೂ ಮರೆತರು. ಆದರೆ, ನವೆಂಬರ್ ಮೊದಲ ವಾರದಲ್ಲಿ ಅರುಣ್ ಪ್ರಕಾಶನ ಹೆಸರಿಗೆ ರಾಷ್ಟ್ರಪತಿಗಳ ಕಚೇರಿಯಿಂದ ಒಂದು ರಿಜಿಸ್ಟರ್ಡ್ ಪತ್ರ ಬಂದೇ ಬಂತು. ಮುಖ್ಯೋಪಾಧ್ಯಾಯರು ನಡುಗುತ್ತಲೇ ಕವರ್ ಬಿಡಿಸಿದರೆ- ಅಲ್ಲಿ ದಿಲ್ಲಿಗೆ ಹೋಗಿ ಬರಲು ಫಸ್ಟ್ಕ್ಲಾಸ್ಟ್ ದರ್ಜೆಯ ರೈಲ್ವೆ ಟಿಕೆಟ್ಗಳಿದ್ದವು. ಜತೆಗೆ ಕಲಾಂ ಅವರ ಪತ್ರವಿತ್ತು. ಅವರು ಬರೆದಿದ್ದರು: `ನವೆಂಬರ್ ೧೪ರಂದು ಮಕ್ಕಳ ದಿನಾಚರಣೆಯಿದೆ. ಅಂದಿನ ಕಾರ್ಯಕ್ರಮಕ್ಕೆ ನೀನು ನನ್ನ ಅತಿಥಿ. ಸಂಕೋಚ, ಹೆದರಿಕೆ, ನಾಚಿಕೆ ಬೇಡವೇ ಬೇಡ. ರೈಲ್ವೆ ಟಿಕೆಟ್ ಇರಿಸಿದ್ದೇನೆ. ಅಪ್ಪ-ಅಮ್ಮನೊಂದಿಗೆ ಬಂದುಬಿಡು. ದಿಲ್ಲಿಯ ರೈಲ್ವೆ ಸ್ಟೇಷನ್ನಲ್ಲಿ ಈ ಪತ್ರ ತೋರಿಸಿದರೆ- ನಿನ್ನನ್ನು ರಾಷ್ಟ್ರಪತಿ ಭವನಕ್ಕೆ ಕರೆತರುವ ವ್ಯವಸ್ಥೆಯಾಗುತ್ತದೆ…’
******
ಖುಷಿ, ಭಯ ಉದ್ವೇಗ ಎಲ್ಲವನ್ನೂ ಜತೆಗಿಟ್ಟುಕೊಂಡೇ ತಂದೆ-ತಾಯಿಯೊಂದಿಗೆ ಅರುಣ್ಪ್ರಕಾಶ್ ದಿಲ್ಲಿಯ ರೈಲು ಹತ್ತಿದ. ಕಲಾಂ ಅವರಿಗೆ ತೋರಿಸಲೆಂದು ತನಗೆ ಬಂದಿದ್ದ ಪ್ರಶಸ್ತಿ-ಬಹುಮಾನಗಳ ಒಂದು ಫೈಲ್ ತಯಾರಿಸಿದ್ದ. ದಿಲ್ಲಿಯ ರೈಲು ನಿಲ್ದಾಣದಲ್ಲಿ ಕಲಾಂ ಅವರ ಪತ್ರ ತೋರಿಸಿದ್ದೇ, ಅವನ ಕುಟುಂಬಕ್ಕೆ ರಾಜಾತಿಥ್ಯ ದೊರಕಿತು.
ಅವತ್ತು ನವೆಂಬರ್ ೧೩. ರಾಷ್ಟ್ರಪತಿ ಭವನಕ್ಕೆ ಹೋದ ತಕ್ಷಣ ಅವನಿಗೆ ಗಾಬರಿಯಾಯಿತು. ಏಕೆಂದರೆ- ಅಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ೧೫೦ ಮಕ್ಕಳಿದ್ದರು. ಎಲ್ಲರೂ ಮಕ್ಕಳ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಪ್ರತಿಭಾವಂತರೇ. ಅವರೆಲ್ಲರೂ ವಿಐಪಿಗಳೇ. ಒಬ್ಬೊಬ್ಬರದು ಒಂದೊಂದು ಸಾಧನೆ. ಇಷ್ಟೊಂದು ಜನರ ಮಧ್ಯೆ ನಾನು ಕಲಾಂ ಅವರೊಂದಿಗೆ ಮನಬಿಚ್ಚಿ ಮಾತಾಡಲು ಸಾಧ್ಯವೆ? ಅವರ ಮುಂದೆ ತನ್ಮಯನಾಗಿ ನಿಂತು ಹಾಡಲು ಸಾಧ್ಯವೆ ಎಂದು ಅರುಣ್ ಪ್ರಕಾಶ್ ಯೋಚಿಸಿದ. ಹೀಗಿದ್ದಾಗಲೇ- ಎಲ್ಲ ಮಕ್ಕಳ ಬಳಿ ಬಂದ ರಾಷ್ಟ್ರಪತಿ ಭವನದ ಅಧಿಕಾರಿಗಳು- ಮರುದಿನ ಬೆಳಗ್ಗೆ ರಾಷ್ಟ್ರಪತಿಗಳು ಬಂದಾಗ ಪಾಲಿಸಬೇಕಿರುವ ಶಿಷ್ಟಾಚಾರದ ಬಗ್ಗೆ ಹೇಳಿದರು. ನಂತರ- `ಕಲಾಂ ಸಾಹೇಬರಿಗೆ ಬಿಡುವಿಲ್ಲದಷ್ಟು ಕೆಲಸ. ಹಾಗಾಗಿ ಎಲ್ಲರೂ ಒಂದೊಂದೇ ನಿಮಿಷದಲ್ಲಿ ನಿಮ್ಮ ಪರಿಚಯ ಹೇಳಿ ಮುಗಿಸಬೇಕು’ ಎಂದು ಆದೇಶ ನೀಡಿದ್ದರು.
ಎಲ್ಲ ಮಕ್ಕಳೂ ಕಾತರದಿಂದ ನಿರೀಕ್ಷಿಸಿದ್ದ ಆ ದಿನ ಕಡೆಗೂ ಬಂದೇ ಬಂತು. ಬೆಳಗ್ಗೆ ಎಂಟು ಗಂಟೆಗೆ ಸರಿಯಾಗಿ ಸೂಟುಧಾರಿಯಾಗಿದ್ದ ಅಬ್ದುಲ್ ಕಲಾಂ ಕಂದನ ಮುಗುಳ್ನಗೆಯೊಂದಿಗೆ ಮಕ್ಕಳೆಲ್ಲ ಇದ್ದ ಅಂಗಳಕ್ಕೆ ಬಂದೇಬಿಟ್ಟರು. ಇವರೆಲ್ಲ ಎದ್ದು ನಿಲ್ಲುವ ಮೊದಲೇ ಕೈ ಜೋಡಿಸಿ, `ಭವ್ಯ ಭಾರತದ ಭಾವಿ ಪ್ರಜೆಗಳಿಗೆ ವಂದನೆ’ ಎಂದರು. ಆ ಮಕ್ಕಳ ತಾಯ್ತಂದೆಯರಿಗೂ ನಮಸ್ಕಾರ ಹೇಳಿದರು. ಪ್ರಯಾಣ-ಊಟ-ವಸತಿಯಲ್ಲಿ ಏನೂ ಲೋಪವಾಗಿಲ್ಲ ತಾನೆ ಎಂದು ವಿಚಾರಿಸಿಕೊಂಡರು. ನಂತರ ಒಬ್ಬೊಬ್ಬನೇ ವಿದ್ಯಾರ್ಥಿಯ ಬಳಿ ಹೋಗಿ ಆತನ ಹೆಸರು, ಊರು, ಶಾಲೆಯ ಬಗ್ಗೆ, ಆತನ ಸಾಧನೆಯ ಬಗ್ಗೆ ತಿಳಿದುಕೊಂಡು, ಆತನಿಗೆ ಒಂದು ಪದಕ ನೀಡಿ, ಶುಭ ಹಾರೈಸಿ, ಒಂದೆರಡು ಕಿವಿಮಾತು ಹೇಳಿ, ಕೈ ಕುಲುಕಿ ಫೋಟೊ ತೆಗೆಸಿಕೊಂಡು ಮತ್ತೊಬ್ಬ ವಿದ್ಯಾರ್ಥಿಯ ಬಳಿ ಬರುತ್ತಿದ್ದರು.
ಕಲಾಂ ತನ್ನೆದುರು ಬಂದು ನಿಂತಾಗ, ಈ ಅರುಣ್ ಪ್ರಕಾಶ್, ನಿಂತಲ್ಲೇ ಒಮ್ಮೆ ನಡುಗಿದ. ತನ್ನ ಕನಸಿನ ಹೀರೋ ಮುಂದೆ ಮಾತಾಡಲು ಆತನ ನಾಲಿಗೆ ತಡವರಿಸಿತು. ನಡುಗುತ್ತಲೇ ಹೆಸರು ಹೇಳಿದ. ಹಿಂದೆಯೇ, ತನ್ನ ಸಾಧನೆ ಪರಿಚಯಿಸುವ ಫೈಲು ಕೊಟ್ಟ.
ಅದನ್ನು ಕಂಡದ್ದೇ ಕಲಾಂ ಕಂಗಳು ಮಿನುಗಿದವು. `ನೀವು- ಎಂದರೋ ಮಹಾನುಭಾವುಲು’ ಹಾಡ್ತೀರಿ ಅಲ್ವ? ಎಂದರು. ಈತ ಹೌದು ಎಂದು ತಲೆಯಾಡಿಸಿದ. `ಪುಟ್ಟಾ, ಹಾಗಾದರೆ ತಡವೇಕೆ? ತ್ಯಾಗರಾಜರ ಈ ಆರಾಧನೆ ನನ್ನ ಫೇವರಿಟ್ ಹಾಡು. ಅದನ್ನು ಕೇಳುತ್ತ ಕೇಳುತ್ತಲೇ ಮೈಮರೆಯಬೇಕು ಅನಿಸುತ್ತೆ. ಈವರೆಗೂ ಸುಬ್ಬುಲಕ್ಷ್ಮಿ, ಯೇಸುದಾಸ್ರ ಕಂಠದಲ್ಲಿ ಅದನ್ನು ಕೇಳಿದೀನಿ. ಇವತ್ತು ನಿನ್ನ ಇನಿದನಿಯಿಂದಲೂ ಕೇಳ್ತೀನಿ. ನೀನು ಹಾಡಲು ಶುರು ಮಾಡು’ ಅಂದೇಬಿಟ್ಟರು. ನಂತರ ಎಲ್ಲ ಶಿಷ್ಟಾಚಾರವನ್ನೂ ಮರೆತು ಹಾಡು ಕೇಳಲು ಕುಳಿತೇ ಬಿಟ್ಟರು.
ರಾಷ್ಟ್ರಪತಿಗಳೇ ಹಾಡು ಕೇಳಲು ಕುಳಿತ ಮೇಲೆ ಹೇಳುವುದೇನಿದೆ? ಉಳಿದವರೂ ಅವರನ್ನು ಅನುಸರಿಸಿದರು. ನಂತರದ ಹತ್ತು ನಿಮಿಷ, ಅರುಣ್ ಪ್ರಕಾಶ್ ದೇವರ ಮುಂದೆ ನಿಂತ ಭಕ್ತನಂತೆ ಎದೆತುಂಬಿ, ಮೈಮರೆತು, ತನ್ಮಯನಾಗಿ ಹಾಡಿದ. ಮಧ್ಯೆ ಮಧ್ಯೆ ಕಲಾಂ ಶಹಭಾಷ್ ಅನ್ನುತ್ತಿದ್ದರು. ಒಂದೆರಡು ಚರಣಗಳಿಗೆ ತಾವೂ ದನಿಗೂಡಿಸಿದರು. ಎಂಟು ನಿಮಿಷದ ನಂತರ ಹಾಡು ಮುಗಿದಾಗ ಖುಷಿಯಿಂದ ಚಪ್ಪಾಳೆ ಹೊಡೆದರು. Arun, you won my heart ಎಂದು ಉದ್ಗರಿಸಿದರು. ರಾಷ್ಟ್ರಪತಿಗಳ ಈ ತುಂಬು ಹೃದಯದ ಪ್ರೀತಿಗೆ ಮೂಕನಾಗಿ, ಬೆರಗಾಗಿ, ಶರಣಾಗಿ-ಅರುಣ್ ಪ್ರಕಾಶ್ ಕಣ್ತುಂಬಿಕೊಂಡು, ಕೈ ಮುಗಿದು ನಿಂತುಬಿಟ್ಟಿದ್ದ.
ಈಗ, ಸಿಂಗಪೂರ್ನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಾನೆ ಅರುಣ್ ಪ್ರಕಾಶ್. ಕಲಾಂ ಅವರ ಹೆಸರು ಕೇಳಿದರೆ ಸಾಕು, ಈಗಲೂ ರೋಮಾಂಚನಗೊಳ್ಳುತ್ತಾನೆ. `ಅವರಂತೆಯೇ ದೊಡ್ಡ ಹೆಸರು ಮಾಡಬೇಕು ಎಂಬುದು ನನ್ನ ಹಿರಿಯಾಸೆ. ಅವರ ಮುಂದೆ ನಿಂತು ಹಾಡಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ’ ಅನ್ನುತ್ತಾನೆ.
ಮಕ್ಕಳೊಂದಿಗೆ ಮಗುವಾಗಿ ಬೆರೆಯುತ್ತಿದ್ದ ಕಲಾಂ ಅವರಂಥ ಮಹನೀಯರೊಬ್ಬರು ಭವ್ಯ ಭಾರತದ ರಾಷ್ಟ್ರಪತಿಗಳಾಗಿದ್ದುದು ನಮ್ಮೆಲ್ಲರ ಪುಣ್ಯ. ಅಲ್ಲವೆ?